ಬ್ರೌನ್, ಸಿ ಪಿ
	1798-1884, ತೆಲುಗು ಭಾಷೆ ಮತ್ತು ಸಾಹಿತ್ಯಗಳಿಗೆ ಅಗ್ರಮಾನ್ಯ ಸೇವೆ ಸಲ್ಲಿಸಿದವರಲ್ಲಿ ಪ್ರಮುಖರು. ತಂದೆ ಡೇವಿಡ್ ಬ್ರೌನ್ ಕಲಕತ್ತೆಯಲ್ಲಿ ಕ್ರೈಸ್ತಧರ್ಮ ಪ್ರಚಾರಕರಾಗಿದ್ದರು. ತಂದೆಯ ನಿಧನಾನಂತರ ಕಲಕತ್ತೆಯಿಂದ ಇಂಗ್ಲೆಂಡಿಗೆ ಮರಳಿದ ಬ್ರೌನ್ 1817ರಲ್ಲಿ ಸಿವಿಲ್ ಅಧಿಕಾರಿಯಾಗಿ ಮದ್ರಾಸಿಗೆ ಬಂದರು. 1817ರಿಂದ 55ರ ತನಕ ತೆಲುಗು ಭಾಷಾ ಪ್ರದೇಶಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಬ್ರೌನರು ತೆಲುಗು ಭಾಷೆಯ ಅಭಿವೃದ್ಧಿಗಾಗಿ ತುಂಬ ಶ್ರಮಿಸಿದರು.

	1824ರಲ್ಲೇ ವೇಮನ ಪದ್ಯಗಳನ್ನು ಅನೇಕ ಮೂಲಗಳಿಂದ ಸಂಗ್ರಹಿಸಿ ಇಂಗ್ಲಿಷಿಗೆ ಅನುವಾದಿಸಿ ಅಚ್ಚಿಗೆ ಅಣಿಗೊಳಿಸಿದ್ದು ಬ್ರೌನರ ಮೊದಲ ಕೆಲಸ. 1829ರಲ್ಲಿ ಅಚ್ಚಾದ ಈ ಕೃತಿ ದೇಶವಿದೇಶಗಳಲ್ಲಿ ಖ್ಯಾತಗಳಿಸಿತು. ಇವರು ಕೆಲವು ತೆಲುಗು ಗ್ರಂಥಗಳನ್ನು ಇಂಗ್ಲಿಷಿಗೂ ಬೈಬಲಿನ ಕೆಲವು ಭಾಗಗಳನ್ನು ತೆಲುಗಿಗೂ ಅನುವಾದಿಸಿದ್ದಾರೆ.

	ಬ್ರೌನರ ಹೆಸರು ತೆಲುಗು ಸಾಹಿತ್ಯದಲ್ಲಿ ಶಾಶ್ವತಗೊಂಡದ್ದು ಅವರ ನಿಘಂಟು ನಿರ್ಮಾಣ ಕಾರ್ಯದಿಂದಾಗಿ. 1852ರಲ್ಲಿ ತೆಲುಗು-ಇಂಗ್ಲಿಷ್ ನಿಘಂಟನ್ನೂ, ಇಂಗ್ಲಿಷ್-ತೆಲುಗು ನಿಘಂಟನನ್ನೂ ಪ್ರಕಟಿಸಿದರು. ಇವು ಇಂದಿಗೂ ಅತ್ಯಂತ ಉಪಯುಕ್ತವೆನಿಸಿವೆ. ಪಾಶ್ಚಾತ್ಯರು ತೆಲುಗು ಕಲಿಯಲು ಉಪಯುಕ್ತವಾಗುವಂತೆ ಬರೆದ ವ್ಯಾಕರಣ. ಪಠ್ಯಪುಸ್ತಕಗಳು, ಛಂದೋಗ್ರಂಥಗಳು ಇವರ ತೆಲುಗು ಪಾಂಡಿತ್ಯಕ್ಕೆ ನಿದರ್ಶನವಾಗಿವೆ.

	ಪ್ರಾಚೀನ ಕಾವ್ಯ ಸಂಗ್ರಹಣೆ ಮತ್ತು ಪ್ರಕಟಣೆ ಕಾರ್ಯದಲ್ಲೂ ಬ್ರೌನರು ಸೇವೆ ಸಲ್ಲಿಸಿದ್ದಾರೆ. ಹಲವು ತೆಲುಗು ಕಾವ್ಯಗಳನ್ನು ಸಂಗ್ರಹಿಸಿ ವ್ಯಾಖ್ಯಾನಗಳನ್ನು ಬರೆಯಿಸಿ, ಪರಿಷ್ಕøತ ಪ್ರತಿಗಳನ್ನು ಮುದ್ರಿಸಿ ಗ್ರಂಥಸಂಪಾದನಾ ಕ್ಷೇತ್ರಕ್ಕೂ ತಮ್ಮ ಕೊಡುಗೆ ಇತ್ತಿದ್ದಾರೆ. ತೆಲುಗು ಮುದ್ರಣ ಕಲೆಗೆ ಇವರು ನೀಡಿದ ಪ್ರೋತ್ಸಾಹ ಗಮನಾರ್ಹವಾದುದು. ತಮಗೆ ಬಂದ ಪತ್ರಗಳನ್ನು ಬ್ರೌನ್ 16 ಸಂಪುಟಗಳಲ್ಲಿ ಒಟ್ಟುಗೂಡಿಸಿ. ಪ್ರತಿಮಾಡಿಸಿ ಭದ್ರಪಡಿಸಿದ್ದುದರಿಂದ ಇದು ಭಾಷಾಧ್ಯಯನ ಮಾಡುವವರಿಗೆ ತುಂಬ ಅನುಕೂಲವಾಗಿದೆ.

	ಅನಾರೋಗ್ಯದ ನಿಮಿತ್ತ ಬ್ರೌನ್ 1855ರಲ್ಲಿ ಇಂಗ್ಲೆಂಡಿಗೆ ಮರಳಿದರು, ಆಗ ಅವರನ್ನು ಲಂಡನ್ ವಿಶ್ವವಿದ್ಯಾಲಯದಲ್ಲಿ ತೆಲುಗು ಪ್ರಾಧ್ಯಾಪಕರಾಗಿ ನೇಮಿಸಲಾಯಿತು. ಅಲ್ಲಿಂದ ಮುಂದೆ ಬ್ರೌನ್ ನಿಧನರಾಗುವತನಕವೂ (1884) ತಮ್ಮ ಭಾಷಾ ಸೇವೆಯನ್ನು ನಿಲ್ಲಿಸಲಿಲ್ಲ.									(ಆರ್.ವಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ